ಬೆಂಗಳೂರು: ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಧ್ಯವಯಸ್ಸಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ಆರೈಕೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಮಹಿಳೆಯರ ಋತುಬಂಧ ಮತ್ತು ಮಧ್ಯವಯಸ್ಸಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ 'ಋತು ತಾರೆ' (Ruthu Taare) ಎಂಬ ವಿಶೇಷ ಆರೋಗ್ಯ ಕಾರ್ಯಕ್ರಮವನ್ನು ಜಾರಿಗೆ ತರಲು ಆದೇಶಿಸಿದೆ. ಈ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
35 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಗುರಿಯಾಗಿಸಿಕೊಂಡಿರುವ ಈ ಯೋಜನೆಯು ಋತುಬಂಧಕ್ಕೆ ಮುನ್ನಿನ ಹಂತ (Perimenopause), ಋತುಬಂಧ (Menopause) ಮತ್ತು ಋತುಬಂಧದ ನಂತರದ ಹಂತದಲ್ಲಿ (Post-menopause) ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಒದಗಿಸುವ ಉದ್ದೇಶ ಹೊಂದಿದೆ.
ಋತುಬಂಧದ ಸಂದರ್ಭದಲ್ಲಿ ಮಹಿಳೆಯರಲ್ಲಿ ಬಿಸಿಯ ಅನುಭವ (Hot Flashes), ರಾತ್ರಿ ಬೆವರುವುದು, ನಿದ್ರಾಹೀನತೆ, ಕೀಲು ನೋವು, ಮೂಳೆಗಳ ದುರ್ಬಲತೆ, ಆತಂಕ, ಮನಸ್ಥಿತಿಯ ಬದಲಾವಣೆ ಹಾಗೂ ಭಾವನಾತ್ಮಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಸಮಸ್ಯೆಗಳನ್ನು ಕೇವಲ ವಯಸ್ಸಾಗುವಿಕೆಯ ಸಹಜ ಪರಿಣಾಮವೆಂದು ನಿರ್ಲಕ್ಷಿಸದೆ, ಅಗತ್ಯವಿದ್ದಲ್ಲಿ ವೈದ್ಯಕೀಯ ತಪಾಸಣೆ ಮತ್ತು ಸಲಹೆ ಪಡೆಯುವಂತೆ ಜಾಗೃತಿ ಮೂಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪ್ರತಿ ಬುಧವಾರ ವಿಶೇಷ ಆರೋಗ್ಯ ತಪಾಸಣೆ
ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ತಾಲೂಕು ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿ ಬುಧವಾರ ವಿಶೇಷ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿ ಮತ್ತು ಅಗತ್ಯ ಸೌಲಭ್ಯಗಳ ಲಭ್ಯತೆಗೆ ಅನುಗುಣವಾಗಿ ಪ್ರತಿ ಶನಿವಾರ ವಿಶೇಷ ಚಿಕಿತ್ಸಾ ಶಿಬಿರಗಳನ್ನು ನಡೆಸಲು ಯೋಜಿಸಲಾಗಿದೆ.
ಈ ಶಿಬಿರಗಳಲ್ಲಿ ಮಹಿಳೆಯರ ರಕ್ತದೊತ್ತಡ, ಮಧುಮೇಹ, ಬೊಜ್ಜು ಹಾಗೂ ಹೃದಯ ಸಂಬಂಧಿತ ಅಪಾಯದ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ಇದರ ಜೊತೆಗೆ ರಾಜ್ಯದ ಮಾರ್ಗಸೂಚಿಗಳ ಪ್ರಕಾರ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆಗೂ ಆದ್ಯತೆ ನೀಡಲಾಗುತ್ತದೆ.
ಮಾನಸಿಕ ಆರೋಗ್ಯಕ್ಕೂ ವಿಶೇಷ ಆದ್ಯತೆ
ಋತುಬಂಧದ ಅವಧಿಯಲ್ಲಿ ಕೆಲವು ಮಹಿಳೆಯರು ಆತಂಕ, ನಿದ್ರೆಯ ಸಮಸ್ಯೆ, ಭಾವನಾತ್ಮಕ ಏರುಪೇರು ಹಾಗೂ ಮಾನಸಿಕ ಒತ್ತಡವನ್ನು ಅನುಭವಿಸಬಹುದು. ಇಂತಹ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಸಲಹೆ ಮತ್ತು ಅಗತ್ಯ ಚಿಕಿತ್ಸೆಗೆ ಸಂಪರ್ಕ ಕಲ್ಪಿಸಲು ಯೋಜನೆಯಡಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ.
ಮಹಿಳೆಯರ ಮಾನಸಿಕ ಆರೋಗ್ಯದ ಸ್ಥಿತಿಯನ್ನು ಗುರುತಿಸಲು ಹಸಿರು, ಹಳದಿ ಮತ್ತು ಕೆಂಪು ಬಣ್ಣಗಳ ಆಧಾರದ ಮೇಲೆ ಅಪಾಯದ ವರ್ಗೀಕರಣ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ. ಅಗತ್ಯವಿರುವ ಮಹಿಳೆಯರನ್ನು ಈಗಾಗಲೇ ಜಾರಿಯಲ್ಲಿರುವ ಮಾನಸಿಕ ಆರೋಗ್ಯ ಸೇವೆಗಳು ಸೇರಿದಂತೆ 'ಗೃಹ ಆರೋಗ್ಯ' ಯೋಜನೆಯೊಂದಿಗೆ ಸಂಪರ್ಕಿಸುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ.
ಪೌಷ್ಟಿಕಾಂಶ ಮತ್ತು ಮೂಳೆಗಳ ಆರೋಗ್ಯಕ್ಕೆ ಒತ್ತು
ಮಧ್ಯವಯಸ್ಸಿನಲ್ಲಿ ಮಹಿಳೆಯರ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲಿತ ಆಹಾರ, ಸಾಕಷ್ಟು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸೇವನೆ, ಮೂಳೆಗಳ ಆರೋಗ್ಯ ಹಾಗೂ ಆಸ್ಟಿಯೊಪೊರೋಸಿಸ್ ತಡೆಗಟ್ಟುವಿಕೆಯ ಬಗ್ಗೆ ವಿಶೇಷ ಪೌಷ್ಟಿಕಾಂಶ ಸಲಹೆ ನೀಡಲಾಗುತ್ತದೆ.
ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕ ಆಹಾರ ಪದಾರ್ಥಗಳ ಬಳಕೆ, ಆರೋಗ್ಯಕರ ತೂಕ ನಿರ್ವಹಣೆ ಮತ್ತು ನಿಯಮಿತ ದೈಹಿಕ ಚಟುವಟಿಕೆಗಳ ಕುರಿತು ಮಹಿಳೆಯರಿಗೆ ಮಾಹಿತಿ ನೀಡಲಾಗುತ್ತದೆ. ಋತುಬಂಧ, ಆಹಾರ ಪದ್ಧತಿ, ದೈಹಿಕ ಚಟುವಟಿಕೆ, ಮೂಳೆಗಳ ಆರೋಗ್ಯ ಮತ್ತು ಮಾನಸಿಕ ಕ್ಷೇಮದ ಕುರಿತು ಕನ್ನಡ ಭಾಷೆಯಲ್ಲಿ ಜಾಗೃತಿ ಸಾಮಗ್ರಿಗಳನ್ನು ಸಿದ್ಧಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಮಹಿಳೆಯರಿಗೆ ಮಧ್ಯವಯಸ್ಸಿನ ಆರೋಗ್ಯ ಕಾರ್ಡ್
ಯೋಜನೆಯ ಪ್ರಮುಖ ಭಾಗವಾಗಿ 'ಮಿಡ್-ಲೈಫ್ ಹೆಲ್ತ್ ಕಾರ್ಡ್' (Mid-Life Health Card) ನೀಡಲು ಉದ್ದೇಶಿಸಲಾಗಿದೆ. ಈ ಕಾರ್ಡ್ನಲ್ಲಿ ಮಹಿಳೆಯರ ಆರೋಗ್ಯ ತಪಾಸಣೆ, ವೈದ್ಯಕೀಯ ಮೌಲ್ಯಮಾಪನ, ಪರೀಕ್ಷೆಗಳ ಫಲಿತಾಂಶ, ವೈದ್ಯಕೀಯ ಸಲಹೆ, ಮುಂದಿನ ಚಿಕಿತ್ಸೆಗೆ ನೀಡುವ ಉಲ್ಲೇಖ ಮತ್ತು ಅನುಸರಣೆ ವಿವರಗಳನ್ನು ದಾಖಲಿಸಲಾಗುತ್ತದೆ.
ಆಶಾ ಕಾರ್ಯಕರ್ತೆಯರು, ಆಶಾ ಮಾರ್ಗದರ್ಶಕರು, ಸಮುದಾಯ ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ನರ್ಸಿಂಗ್ ಸಿಬ್ಬಂದಿಗೆ ಈ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿ ನೀಡಲಾಗುತ್ತದೆ. ಅರ್ಹ ಮಹಿಳೆಯರನ್ನು ಗುರುತಿಸಿ ಆರೋಗ್ಯ ಸೇವೆಗಳೊಂದಿಗೆ ಸಂಪರ್ಕಿಸುವ ಜವಾಬ್ದಾರಿಯನ್ನೂ ಸಂಬಂಧಪಟ್ಟ ಆರೋಗ್ಯ ಸಿಬ್ಬಂದಿಗೆ ನೀಡಲಾಗುತ್ತದೆ.
ಮೂರು ತಿಂಗಳ ಬಳಿಕ ಯೋಜನೆಯ ಮೌಲ್ಯಮಾಪನ
ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲಿದ್ದು, ಪ್ರತಿ ತಿಂಗಳು ಪ್ರಗತಿ ವರದಿಯನ್ನು ಸಲ್ಲಿಸಬೇಕಾಗಿದೆ. ಮೂರು ತಿಂಗಳ ಪ್ರಾಯೋಗಿಕ ಅವಧಿ ಪೂರ್ಣಗೊಂಡ ಬಳಿಕ ಎಷ್ಟು ಮಹಿಳೆಯರಿಗೆ ತಪಾಸಣೆ ನಡೆಸಲಾಗಿದೆ, ಅಗತ್ಯವಿರುವವರಿಗೆ ಚಿಕಿತ್ಸೆ ಮತ್ತು ಉಲ್ಲೇಖ ಸೇವೆಗಳು ದೊರೆತಿವೆಯೇ, ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳು ಲಭ್ಯವಿವೆಯೇ ಎಂಬ ಅಂಶಗಳನ್ನು ಪರಿಶೀಲಿಸಲಾಗುತ್ತದೆ
ಈ ಯೋಜನೆಯ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ.
ಮಹಿಳೆಯರ ಆರೋಗ್ಯವು ಕೇವಲ ತಾಯ್ತನ ಅಥವಾ ಸಂತಾನೋತ್ಪತ್ತಿಗೆ ಮಾತ್ರ ಸೀಮಿತವಾಗದೆ, ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಮಾನ ಮಹತ್ವ ಪಡೆಯಬೇಕು ಎಂಬ ಉದ್ದೇಶದೊಂದಿಗೆ 'ಋತು ತಾರೆ' ಕಾರ್ಯಕ್ರಮವನ್ನು ರೂಪಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಆರಂಭವಾಗುತ್ತಿರುವ ಈ ಪ್ರಾಯೋಗಿಕ ಯೋಜನೆಯ ಅನುಷ್ಠಾನ ಮತ್ತು ಫಲಿತಾಂಶಗಳು ರಾಜ್ಯದ ಮಹಿಳಾ ಆರೋಗ್ಯ ಸೇವೆಗಳ ಮುಂದಿನ ರೂಪುರೇಷೆಗಳಿಗೆ ಮಹತ್ವದ್ದಾಗಲಿವೆ.
